text
stringlengths
0
2.67k
ಅಳಿಯ ಕೋಮಾರಸಿಂಗ ಎಂಬುವವ ಇದನ್ನು ಕಟ್ಟಿಸಿದ. ಎತ್ತರದ ಜಗತಿ ಮೇಲೆ ಕಟ್ಟಲಾಗಿದ್ದು ಗಜಪೃಷ್ಠಾಕಾರದಲ್ಲಿ ಇರುವುದು ಇದರ
ವಿಶೇಷತೆ. ಇದರ ಅಸಂಖ್ಯ ಕಲ್ಲಿನ ಕಂಬಗಳು ಹಾಗು ಇಂಗ್ಲೀಷ ಅಕ್ಷರದ U ಆಕಾರದ ವಿಶಿಷ್ಠ ರಚನೆಯಿಂದ ಹೊರನೋಟಕ್ಕೆ ದೆಹಲಿಯ
ಸಂಸತ್ ಭವನವನ್ನು ನೆನಪಿಸುತ್ತದೆ. ಐಹೊಳೆಯ ಕೋಟೆಯನ್ನು ಉತ್ತರ ರಸ್ತೆಯಿಂದ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಕ್ರಿ.ಶ ೫ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ ಕಂಗೊಳಿಸುವ ದುರ್ಗೆಯ ಮಂದಿರ ಮನಸೆಳೆಯುತ್ತದೆ.
ದೇವಾಲಯದ ಮುಖಮಂಟಪದ ಭಿತ್ತಿಯ ಅಡ್ಡಪಟ್ಟಿಕೆಗಳಲ್ಲಿ ರಾಮಲಕ್ಷ್ಮಣ ಸೀತಾಮಾತೆಯನ್ನು ಗುಹ -ನಾವೆಯ ನೆರವಿನಿಂದ ನದಿ ದಾಟಿಸಿದ ಸುಂದರ ಉಬ್ಬುಶಿಲ್ಪವಿದೆ. ಪುರಾಣ, ಪುಣ್ಯಕಥೆಗಳ ಹಲವು ಕಥಾನಕಗಳು ಇಲ್ಲಿವೆ.
೨. ಕ್ರಿ.ಶ.೪೫೦ರಲ್ಲಿ ನಿರ್ಮಿತವಾದ ಲಾಡಖಾನ್ದ್ದೇ ಇಲ್ಲಿನ ಪ್ರಾಚೀನ ದೇವಾಲಯ. ವಿಷ್ಣುವಿಗೆ ಸಮರ್ಪಿತವಾಗಿದ್ದ ದೇವಾಲಯದ ರಚನೆಯಲ್ಲಿ ಗುಪ್ತ ಸಂಪ್ರದಾಯದ ಪ್ರಭಾವವು ಕಂಡು ಬರುತ್ತದೆ. ಏಕೆಂದರೆ ಪೂರ್ಣ ಕಲಶ ಮತ್ತು ನಿಂತ ನಿಲುವಿನ ಗಂಗೆ-ಯಮುನೆಯರ ಆಕೃತಿಗಳು ಇಲ್ಲಿವೆ. ಇದರ ಹೆಸರಿಗೂ ದೇವಾಲಯಕ್ಕೂ ಯಾವುದೇ ಸಂಬಂಧವಿಲ್ಲ. ಬಹುಶ: ಮುಸ್ಲಿಂ ಸಂತನೊಬ್ಬ ಇಲ್ಲಿ ವಾಸವಾಗಿದ್ದರಿಂದ ಈ ಹೆಸರು ಬಂದಿರಬಹುದು. ಪೂರ್ವದಲ್ಲಿ ಇದೊಂದು ಸಮುದಾಯ ಭವನಾಗಿದ್ದು ನಂತರದ ಕಾಲಘಟ್ಟದಲ್ಲಿ ಗರ್ಭಗುಡಿಯನ್ನು ಸೇರಿಸಿದಂತಿದೆ. ಇಲ್ಲಿನ ಕಂಬವೊಂದರ ಮೇಲೆ ಚಳುಕ್ಯರ ರಾಜ ಲಾಂಛನ, ಕಲ್ಲಿನ ಏಣಿ ಹಾಗು ವಿವಿಧ ಚಿತ್ತಾರದ ಜಾಲಂಧ್ರಗಳು ಗಮನ ಸೆಳೆಯುತ್ತವೆ
೩. ಕ್ರಿ.ಶ.೬೩೪ರಲ್ಲಿ ೨ನೆಯ ಪುಲಿಕೇಶಿಯ ಕಾಲದಲ್ಲಿ ಅವನ ಆಶ್ರಯದಲ್ಲಿದ್ದ ರವಿಕೀರ್ತಿಯಿಂದ ಮೇಗುಟಿ(ಮೇಗುಡಿ ಅಂದರೆ ಮೇಲಿನ ಗುಡಿ) ದೇವಾಲಯವು ನಿರ್ಮಾಣವಾಯಿತು. ಎತ್ತರವಾದ ಸ್ಥಳದಲ್ಲಿರುವ ಕಾರಣ ದೇವಾಲಯಕ್ಕೆ ಈ ಹೆಸರು ಬಂದಿದೆ.ಜಿನನಿಗೆ ಸಮರ್ಪಿತ ವಾಗಿದ್ದ ಈ ಗುಡಿಯು ಗರ್ಭಗೃಹ ಮತ್ತು ನವರಂಗಗಳನ್ನು ಹೊಂದಿದೆ. ಇದು ಬೆಟ್ಟದ ಮೇಲಿದ್ದು ಎತ್ತರದ ಅಧಿಷ್ಠಾನದ ಮೇಲೆ ಕಟ್ಟಲಾಗಿದೆ. ಇದನ್ನು ಇಮ್ಮಡಿ ಪುಲಿಕೇಶಿಯ ಆಸ್ಥಾನದಲ್ಲಿದ್ದ ರವಿಕೀರ್ತಿ ಎಂಬ ಕವಿ ಕಟ್ಟಿಸಿದ. ಇಲ್ಲಿನ ಮುಖಮಂಟಪದ ಹೊರಭಿತ್ತಿಯ ಮೇಲೆ ಚಾಳುಕ್ಯ ಅರಸರ ವಂಶಾವಳಿ ಹಾಗು ಉತ್ತರ ಭಾರತದ ವಿಷ್ಣುವರ್ಧನ ಹಾಗು ಇಮ್ಮಡಿ ಪುಲಕೇಶಿ ನಡುವೆ ನಡೆದ ಯುದ್ಧದ ವಿವರಣಾತ್ಮಕ ಶಾಸನವಿದೆ. ಇಲ್ಲಿ ಮಹಡಿ ಮೇಲೊಂದು ಗರ್ಭಗುಡಿ ಇರುವುದು ವಿಶೇಷ. ಮೇಲಿರುವ ಗರ್ಭಗೃಹಕ್ಕೆ ಹೋಗಲು ಅಂತರಾಳದಲ್ಲಿ ಮೆಟ್ಟಿಲುಗಳಿವೆ. ಇದು ಕರ್ನಾಟಕದ ಅತ್ಯಂತ ಪುರಾತನ ಜಿನಾಲಯವಾಗಿದ್ದು ಅಧ್ಯನದ ದೃಷ್ಟಿಯಿಂದ ಮಹತ್ವದ್ದಾಗಿದೆ.
೪. ಕೊಂಟಿಗುಡಿ (ಕೊಂಟ ಅಥವಾ ತ್ರಿಶೂಲವನ್ನು ಸದಾ ಹೊಂದಿದವನೊಬ್ಬನು ವಾಸಿಸುತ್ತಿದ್ದ ಕಾರಣ ಈ ಹೆಸರು) ಎಂದು ಹೆಸರು ಪಡೆದ ದೇವಾಲಯದ ೪ ಕಂಭಗಳಿಗೆ ಆಧಾರವೇ ಇಲ್ಲ ;ಅವು ಅಡಿಯಿಂದ ಗುಂಡಾದ ಬೋದಿಗೆಯವರೆಗೆ ಚೌಕಾಕಾರವಾಗಿವೆ.
ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ ಲೇಖನ
ಬದಲಾಯಿಸಿ
ಮಲಪ್ರಭಾ ನದಿಯ ದಂಡೆಯ ಮೇಲೆ, ಬಿಜಾಪುರ ಜಿಲ್ಲೆಯ ಹುನಗುಂದ ತಾಲ್ಲೂಕಿನಲ್ಲಿ ಆ ನಗರಕ್ಕೆ 26 ಕಿಮೀ ಪುರ್ವಕ್ಕಿರುವ ಹಳ್ಳಿ. ಇದಕ್ಕೆ ಐಹೊಳ್ಳಿ, ಐವಳ್ಳಿ ಎಂದೂ ಹೆಸರುಗಳುಂಟು. ಇದೊಂದು ಪುರಾತನ ಗ್ರಾಮ. ಇಲ್ಲಿನ ಶಿಲ್ಪವೈಭವದಿಂದಾಗಿಯೂ ಇತಿಹಾಸೋಪಯುಕ್ತ ಶಾಸನ ಸಂದೋಹದಿಂದಾಗಿಯೂ ಇದಕ್ಕೆ ಪ್ರಾಶಸ್ತ್ಯ. ಸುಮಾರು 152 ಮೀ ಅಗಲದ ಪ್ರದೇಶವನ್ನು ಸುತ್ತುವರಿದಿರುವ ಜೀರ್ಣ ಕೋಟೆಯ ನಡುವೆಯೂ ಅದರಿಂದಾಚೆಗೂ ಗತಕಾಲದ ಮೂಕಸಾಕ್ಷಿಗಳಾಗಿ ನಿಂತಿರುವ ಸು. 70 ದೇವಾಲಯಗಳಿವೆ. ಕೋಟೆ 6ನೆಯ ಶತಮಾನದಲ್ಲಿ ಕಟ್ಟಿಸಿದ್ದು. ಆ ಕಾಲಕ್ಕೆ ಸಂಬಂಧಿಸಿದ ಕೆಲವು ಶಾಸನಗಳು ಅದರ ಮೇಲಿವೆ. ಊರಿನ ದಕ್ಷಿಣಕ್ಕಿರುವ ಗುಡ್ಡ ಇಲ್ವಲನೆಂಬ ದೈತ್ಯನ ದೇಹವೆಂದು ಪ್ರತೀತಿಯುಂಟು. ಐವಳ್ಳಿ ಅಥವಾ ಐಯಹೊಳೆ ಎಂಬ ಹೆಸರು ಬರುವುದಕ್ಕೆ ಹೊಳೆಯ ದಂಡೆಯ ಮೇಲೆ ಈ ಹಳ್ಳಿಯಲ್ಲಿ ವಾಸಿಸುತ್ತಿದ್ದ ಗುರುಗಳು, ಅಯ್ಯಗಳು ಕಾರಣವೆಂದು ಹೇಳಲಾಗಿದೆ. ಸಂಸ್ಕೃತದಲ್ಲಿ ಇದು ಆರ್ಯಪುರ. ಐಹೊಳೆಯ ಲಾಡಖಾನ ಗುಡಿಯ ಮೇಲಿನ 6-7ನೆಯ ಶತಮಾನಗಳ ಎರಡು ಶಾಸನಗಳಲ್ಲಿ ಆರ್ಯಪುರದ ಉಲ್ಲೇಖವುಂಟು. ಪುರಾಣದ ಪರಶುರಾಮ ಕ್ಷಾತ್ರವಧೆ ಪುರೈಸಿದ ಮೇಲೆ ಮಲಪ್ರಭಾ ನದಿಗೆ ಬಂದು ಅದರ ನೀರಿನಲ್ಲಿ ತನ್ನ ಕೊಡಲಿ ತೊಳೆದನಂತೆ. ಹೊಳೆಯ ನೀರು ರಕ್ತವರ್ಣಕ್ಕೆ ತಿರುಗಿದ್ದನ್ನು ಕಂಡು ‘ಐಹೊಳೆ!’ ಎಂದು ಉದ್ಗರಿಸಿದನಂತೆ. ಆದ್ದರಿಂದ ಇದು ಐಹೊಳೆಯಾಯಿತೆಂದೂ ಪ್ರತೀತಿಯಿದೆ. ಇಲ್ಲಿರುವ ರಾಮಲಿಂಗ ದೇವಾಲಯ ಪುರಾತನವೂ ಸುಂದರವೂ ಆದದ್ದು ಫಾಲ್ಗುಣ ಶುಕ್ಲ ಸಪ್ತಮಿಯಂದು ಇದರ ರಥೋತ್ಸವ. ಹೊಳೆಯ ದಂಡೆಯ ಬಂಡೆಯ ಮೇಲೊಂದು ಶಾಸನವನ್ನು ಕೊರೆಯಲಾಗಿದೆ. ಇದಕ್ಕೂ ಊರಿಗೂ ನಡುವೆ ಇರುವ ಮುದಿಬೀದಿಯ ಆಚೀಚೆ ಬದಿಗಳಲ್ಲಿ ಮುರುಕು ದೇಗುಲಗಳ ಸಾಲುಗಳನ್ನು ಕಾಣಬಹುದು.
ಗುಡ್ಡದ ಮೇಲಿರುವ ದೇವಸ್ಥಾನದ ಹೆಸರು ಮೇಗುಡಿ (ಮೇಗುಟಿ). ಇದೊಂದು ಜೈನಮಂದಿರ. ದ್ರಾವಿಡ ಶೈಲಿಯಲ್ಲಿ ಇದನ್ನು ಕಟ್ಟಲಾಗಿದೆ. ಇದು ಎರಡನೆಯ ಪುಲಿಕೇಶಿಯ ಕಾಲದ್ದು. ಈ ಗುಡಿಯ ಸುತ್ತ ಇರುವ ಕಲ್ಲಿನ ಗೋಡೆಯನ್ನು ಸ್ವಲ್ಪ ಕಾಲ ಕೋಟೆಯಂತೆ ಉಪಯೋಗಿಸುತ್ತಿದ್ದರೆಂದು ಕಾಣುತ್ತದೆ. 556ನೆಯ ಶಕವರ್ಷದ (ಪ್ರ.ಶ. 634) ಪ್ರಸಿದ್ಧ ಐಹೊಳೆ ಶಾಸನವಿರುವುದು ದೇಗುಲದ ಪ್ರಾಕಾರದ ಹೊರಗೆ-ಪುರ್ವದ ಕಡೆಗೆ. ಚಾಳುಕ್ಯ ರಾಜ ಎರಡನೆಯ ಪುಲಿಕೇಶಿಯ ಆಸ್ಥಾನಕವಿ ರವಿಕೀರ್ತಿ ಇದನ್ನು ರಚಿಸಿದ. ಇದರಲ್ಲಿ ಇತಿಹಾಸಕ್ಕೆ ಸಂಬಂಧಿಸಿದ ಅನೇಕ ವಿವರಗಳಿವೆ. ಬಾದಾಮಿಯ ಚಾಳುಕ್ಯರ ಪುರ್ವೇತಿಹಾಸಕ್ಕೆ ಆಧಾರವಾದ ಅನೇಕ ಸಂಗತಿಗಳು ಇದರಿಂದ ಗೋಚರವಾಗಿವೆ ಎನ್ನಬಹುದು. ತಿಪ್ಪೇರುದ್ರಸ್ವಾಮಿಯವರು ಹೇಳುವ ಹಾಗೆ ಪುಲಿಕೇಶಿಯ ವೀರಜೀವನಕ್ಕೆ ಇದೊಂದು ಉಜ್ಜ್ವಲಸಾಕ್ಷಿ. ಕದಂಬವಂಶಕ್ಕೆ ಕುಬ್ಜಕವಿಯ ತಾಳಗುಂದ ಶಾಸನ ಎಷ್ಟು ಪ್ರಮುಖವಾಗಿ ಪರಿಣಮಿಸಿದೆಯೋ ಚಾಳುಕ್ಯ ವಂಶಕ್ಕೆ ರವಿಕೀರ್ತಿಯ ಐಹೊಳೆ ಶಾಸನ ಅಷ್ಟು ಪ್ರಮುಖವಾದುದು. ಬಾದಾಮಿಯ ಚಾಳುಕ್ಯರ ವಂಶಪರಂಪರೆ, ಎರಡನೆಯ ಪುಲಿಕೇಶಿಯ ಯುದ್ಧವಿವರಗಳು, ಅವನ ರಾಜ್ಯ ವಿಸ್ತಾರದ ವಿವರಗಳು-ಎಲ್ಲ ಇಲ್ಲಿ ದೊರೆಯುತ್ತವೆ (ನೋಡಿ- ಪುಲಕೇಶಿ). ಚಾಳುಕ್ಯರು ಮೊದಲು ಸಪ್ತಮಾತೃಕೆಯರನ್ನು ಮತ್ತು ಕಾರ್ತಿಕೇಯನನ್ನು ತಮ್ಮ ಮನೆದೇವರೆಂದು ಪುಜಿಸುತ್ತಿದ್ದು ಅನಂತರ ಅವರು ವೈಷ್ಣವ ಮತ ಸ್ವೀಕಾರ ಮಾಡಿದರಾದರೂ ಅವರು ಅನ್ಯಮತಸಹಿಷ್ಣುಗಳು; ಜೈನರಿಗಾಗಿ ಬಸದಿಗಳನ್ನೂ ಶೈವರಿಗೆ ಶಿವಾಲಯಗಳನ್ನೂ ಕಟ್ಟಿಸಿದರು
ಮೇಗುಡಿಯ ಬಳಿ ನಿಂತು ನೋಡಿದರೆ ಐಹೊಳೆಯ ಸಮಗ್ರ ದರ್ಶನವಾಗುತ್ತದೆ. ಊರಿನ ತುಂಬ ಚೆಲ್ಲಾಡಿದಂತಿರುವ ದೇವಾಲಯಗಳ ಪೈಕಿ ಎತ್ತರವಾದದ್ದು ದುರ್ಗಿಯ ದೇಗುಲ. ಇದರ ಗರ್ಭಗುಡಿ ಬೌದ್ಧ ಚೈತ್ಯಗಳಂತೆ ಅರ್ಧವರ್ತುಲಾಕಾರವಾಗಿದೆ. ಅದಕ್ಕೆ ಸೇರಿದಂತೆ ಆಯಾತಾಕಾರದ ಮಂಟಪವಿದೆ. ಇವೆರಡಕ್ಕೂ ಹೊಂದಿದಂತಿರುವ ಪ್ರದಕ್ಷಿಣಪಥ. ಗರ್ಭಗುಡಿಯ ಮುಂಭಾಗದಲ್ಲಿ ಮುಖಭದ್ರ (ಪೋರ್ಚ್). ಮೇಲೆ ಔತ್ತರೇಯ ಪದ್ಧತಿಯಲ್ಲಿ ಕಟ್ಟಲಾದ ಸಣ್ಣ ಶಿಖರ. ಇಲ್ಲಿ ಗಂಧರ್ವ ದಂಪತಿಗಳು. ಲಕುಳೇಶ, ಸಿಂಹ ಮುಂತಾದ ಮೂರ್ತಿಗಳು ಇವೆ. ಈ ದೇಗುಲದ ಕಾಲ ಸು. 500 ಎಂದು ಹೇಳಲಾಗಿದೆ. ಬೌದ್ಧ ಗುಹಾದೇವಾಲಯದ ನಿರ್ಮಾಣದಿಂದ ಜೈನ ಮತ್ತು ಬ್ರಾಹ್ಮಣ ಸಂಪ್ರದಾಯಗಳಿಗೆ ನಡೆದು ಬಂದ ಹಾದಿಯ ನಾನಾ ಮಜಲುಗಳನ್ನು ಉಳಿಸಿಕೊಂಡಿರುವ ದೇವಾಲಯ ಈಗ ತಿಳಿದಿರುವ ಮಟ್ಟಿಗೆ ಇದೊಂದೇ. ಇದು ಚೈತ್ಯ ಗುಹೆಗಳನ್ನು ಬಹಳ ಮಟ್ಟಿಗೆ ಹೋಲುತ್ತದೆ. ಬೌದ್ಧ ಚೈತ್ಯ ಶೈಲಿಯನ್ನು ಬ್ರಾಹ್ಮಣ ದೇವಸ್ಥಾನಕ್ಕೆ ಅಳವಡಿಸಿಕೊಳ್ಳುವ ಪ್ರಯತ್ನ ಇದಾಗಿರಬಹುದು. ಈ ದೇವಸ್ಥಾನದ ಮಹಾದ್ವಾರದ ಮೇಲಣ ಶಾಸನದಲ್ಲಿ ಪ್ರ.ಶ. 650-80ರ ವರೆಗೆ ಆಳಿದ ಚಾಳುಕ್ಯ ವಿಕ್ರಮಾದಿತ್ಯನ ಹೆಸರನ್ನು ಕಾಣಬಹುದು. ಪಶ್ಚಿಮ ಭಾರತದ ದೇಗುಲ ಶಿಲ್ಪಗಳಲ್ಲಿ ಇದೇ ಹಳೆಯದೆಂದು ಈಚಿನವರೆಗೂ ನಂಬಲಾಗಿತ್ತು. ಆದರೆ ಇದೇ ಗ್ರಾಮದಲ್ಲಿರುವ ಮೇಗುಡಿ, ಲಾಡ್ಖಾನ್ ಮತ್ತು ಕೊಂತಗುಡಿಗಳು ಇದಕ್ಕಿಂತ ಹಳೆಯವೆಂಬುದಾಗಿ ತಿಳಿದುಬಂದಿದೆ. ಲಾಡ್ಖಾನ್ ಮತ್ತು ಕೊಂತಗುಡಿ ದೇಗುಲಗಳು ಬಾದಾಮಿಯ ಮೂರನೆಯ ಗುಹೆಗಿಂತಲೂ ಪ್ರಾಚೀನವಾದುವು. ಇವುಗಳ ಕಾಲ 578, ಕಂಬಗಳ ಮೇಲೆ ನಾನಾ ಚಿತ್ರಗಳನ್ನು ಕೊರೆಯಲಾಗಿದೆ. ಗುಡಿಯ ಗೋಡೆಯ ಗೂಡುಗಳಲ್ಲಿ ವಿಷ್ಣುವಿನ ಅವತಾರಗಳ ಮೂರ್ತಿಗಳಿವೆ. ನಡುನಡುವೆ ಜಾಲಂಧ್ರಗಳು. ಕೆಳಗಡೆ ಪುರಾಣದ ಕಥೆಗಳ ಸನ್ನಿವೇಶಗಳ ಚಿತ್ರ. ಶಿಲ್ಪದೃಷ್ಟಿಯಿಂದ ಈ ಗುಡಿಯ ಮೂರ್ತಿಗಳು ಅಷ್ಟೇನೂ ನಯವಾಗಿಲ್ಲ. ಆದರೆ ಅವುಗಳ ಸ್ವತಂತ್ರ ಅಭಿವ್ಯಕ್ತಿ ಅಸಾಧಾರಣ. ಗುಡಿಯ ತಳಭಾಗದಲ್ಲಿ ಏಳನೆಯ ಶತಮಾನದ ಕೊನೆಯ ಭಾಗದ್ದೆಂದು ಹೇಳಬಹುದಾದ ಕನ್ನಡ ಲಿಪಿಯ ಶಾಸನವೊಂದಿದೆ. ಅತ್ಯಂತ ಪ್ರಾಚೀನವಾದ (450) ಲಾಡ್ಖಾನ್ ಗುಡಿಯಲ್ಲಿ ದೊಡ್ಡ ಮಂಟಪವೂ ಮುಖಮಂಟಪವೂ ಇವೆ. ಗರ್ಭಗುಡಿ ಇರುವುದು ಮಂಟಪದೊಳಗೆ. ಮಂಟಪವನ್ನು ನಾಲ್ಕು ದಪ್ಪ ಚೌಕ ಕಂಬಗಳು ಹೊತ್ತು ನಿಂತಿವೆ. ಇದರ ಮಾಳಿಗೆಯ ಮೇಲೊಂದು ಗುಡಿಯುಂಟು. ಈ ಗುಡಿಯಲ್ಲಿ 8-9ನೆಯ ಶತಮಾನಗಳ ಎರಡು ಶಾಸನಗಳನ್ನು ಕಾಣಬಹುದು. ಐಹೊಳೆಯಲ್ಲಿ ಎರಡು ಗುಹಾದೇವಾಲಯಗಳುಂಟು. ಇವುಗಳಲ್ಲಿ ಒಂದು ಜೈನ. ಇವೆರಡಲ್ಲದೆ ಇನ್ನೊಂದರ ಒಂದು ಭಾಗ ಗುಹಾದೇವಾಲಯ; ಉಳಿದದ್ದು ನಿರ್ಮಿತ. ಜೈನ ಗುಹಾದೇವಾಲಯದ ಬೆಟ್ಟದ ಬಂಡೆಯ ಮುಖದಲ್ಲಿದೆ. ಪಡಸಾಲೆಯ ಮುಂದಿನ ಗೋಡೆ ದೊಡ್ಡ ಕಲ್ಲುಗಳಿಂದಾದದ್ದು. ಪಡಸಾಲೆಯ ತುದಿಯಲ್ಲಿ ಹಾವಿನ ಹೆಡೆಯ ಕೆಳಗೆ ಪಾಶರ್ವ್‌ನಾಥ-23ನೆಯ ಜೈನ ತೀರ್ಥಂಕರ; ಇದರ ಇನ್ನೊಂದು ಕೊನೆಯಲ್ಲಿ ಇಬ್ಬರು. ಸ್ತ್ರೀಮೂರ್ತಿಗಳೊಂದಿಗಿರುವ ಜಿನತೀರ್ಥಂಕರ ಮೂರ್ತಿಯ ಮಂದಿರವಿದು.
ಇನ್ನೊಂದು ಗುಹಾದೇವಾಲಯ ಬಾದಾಮಿಯ ಚಾಳುಕ್ಯರ ಕಾಲದ್ದು. ಇದರಲ್ಲಿ ಮಂಟಪ, ಎರಡು ಬದಿಯ ಮಂಟಪಗಳು, ಸುಕನಾಸಿ, ಗರ್ಭಗುಡಿ ಎಂಬ ಐದು ಭಾಗಗಳಿವೆ. ಬಲಭಾಗದ ಮಂಟಪದಲ್ಲಿ ಗಣಪತಿ. ಷಣ್ಮುಖ ಮತ್ತು ಪಾರ್ವತಿ ಇವರನ್ನು ಕೂಡಿಕೊಂಡು ನಟರಾಜ ನೃತ್ಯ ಮಾಡುತ್ತಿದ್ದಾನೆ. ಅವನ ಜೊತೆಗೆ ಸಪ್ತಮಾತೃಕೆಯರೂ ನೃತ್ಯ ಮಾಡುತ್ತಿದ್ದಾರೆ. ಮೇಲ್ಭಾಗದ ಒಂದು ಮೂಲೆಯಲ್ಲಿ ಭೃಂಗಿ ಅಸ್ಥಿಪಂಜರ ರೂಪದಲ್ಲಿ ಕುಣಿಯುತ್ತಿದ್ದಾನೆ. ಹರಿಹರ, ಪಾರ್ವತಿ ಸಮೇತನಾದ ಶಿವ, ಅರ್ಧನಾರೀಶ್ವರ, ಮಹಿಷಾಸುರಮರ್ದಿನಿ ಇತ್ಯಾದಿ ಸುಂದರಮೂರ್ತಿಗಳನ್ನು ಈ ಗುಹದೇವಾಲಯದಲ್ಲಿ ಕೆತ್ತಿದ್ದಾರೆ. ವಿಷ್ಣುವಿನ ಅವತಾರಗಳಲ್ಲೊಂದಾದ ವರಾಹಮೂರ್ತಿಯನ್ನೂ ಇಲ್ಲಿ ಕಾಣಬಹುದು. ಇಲ್ಲಿನ ಶಿಲ್ಪ ಬಲು ಸರಳ. ಆರನೆಯ ಶತಮಾನದ ಆದಿಯಲ್ಲಿ ಇದನ್ನು ಕಟ್ಟಿರಬಹುದು. ಗರ್ಭಗುಡಿಯಲ್ಲಿ ಪೀಠಮಾತ್ರವಿದ್ದು ಅದರ ಮೇಲೆ ಉಪಾಸ್ಯ ದೇವತೆಯಿಲ್ಲ. ಇದಕ್ಕೆ ಸ್ವಲ್ಪ ದೂರದಲ್ಲಿರುವುದು ಹುಚ್ಚುಮಲ್ಲಿ ಗುಡಿ. ಇದು ಪಶ್ಚಿಮಾಭಿಮುಖ. ಇದರಲ್ಲಿ ಕಂಡುಬಂದಿರುವ ಹೊಸ ಅಂಶವೆಂದರೆ ಅಂತರಾಳ. ಈ ಗುಡಿಯಲ್ಲಿ ಎತ್ತರವಾದ ವಿಮಾನ, ಗರ್ಭಗುಡಿ, ಸುಕನಾಸಿ ಮಂಟಪ, ಪ್ರದಕ್ಷಿಣ ಪಥ, ಮುಖಮಂಟಪ-ಎಲ್ಲವೂ ಉಂಟು. ಸುಕನಾಸಿಯನ್ನು ರಚಿಸುವ ಪ್ರಥಮ ಪ್ರಯತ್ನವನ್ನೂ ಈ ಗುಡಿಯಲ್ಲೇ ಮಾಡಿದಂತೆ ತೋರುತ್ತದೆ. ಇಲ್ಲಿ ವಿಜಯಾದಿತ್ಯನ ಕಾಲದ (708) ಶಾಸನವೊಂದುಂಟು. ಒರಿಸ್ಸಾ ರಾಜ್ಯದ ಭುವನೇಶ್ವರದಲ್ಲಿರುವ ಪರಶುರಾಮೇಶ್ವರ ದೇವಸ್ಥಾನದಂತೆಯೇ ಈ ದೇಗುಲವಿರುವುದು ಗಮನಾರ್ಹ.
ನಾರಾಯಣನ ಸುಂದರ ಪ್ರತಿಮೆ ಇರುವ ದೊಡ್ಡ ದೇವಾಲಯವೊಂದು ಸನಿಯದಲ್ಲೇ ಇದೆ. ಕೊಂತಗುಡಿ ಸಣ್ಣದಾದರೂ ಅದರಲ್ಲಿ ಅನೇಕ ಶಾಸನಗಳಿರುವುದರಿಂದ ಮುಖ್ಯವಾದದ್ದು. ಐಹೊಳೆಯ ದೇಗುಲಗಳ ಅನೇಕ ಮೂರ್ತಿಗಳನ್ನೂ ಕಂಬಗಳನ್ನೂ ನೆರೆಹೊರೆಯವರು ಸಾಗಿಸಿಕೊಂಡು ಹೋಗಿ ತಮ್ಮ ಸ್ಥಳಗಳಲ್ಲಿನ ಗುಡಿಗಳಿಗೆ ಉಪಯೋಗಿಸಿಕೊಂಡಿದ್ದಾರೆ. ಐಹೊಳೆಯಲ್ಲಿ ಪ್ರಾಚೀನ ಕಾಲದಲ್ಲಿ ವಿದ್ಯಾಪೀಠ (ಅಧಿಷ್ಠಾನ) ಇದ್ದಂತೆ ತೋರುತ್ತದೆ. ಐಹೊಳೆ ಐದುನೂರು ಸ್ವಾಮಿಗಳ ವಣಿಕ್ಸಂಘದ ತವರೂರು, 8ನೆಯ ಶತಮಾನದಲ್ಲಿ ಇದು ಪುಲಿಗೆರೆ ಸಂಘದಂಥ ಘಟನೆ ಪಡೆದಿತ್ತು. ಲಾಡ್ಖಾನ್ ಗುಡಿಯಲ್ಲಿ 8 ಮತ್ತು 9ನೆಯ ಶತಮಾನಗಳ ಎರಡು ಶಾಸನಗಳಿದ್ದು 500 ಐಹೊಳೆ ಸ್ವಾಮಿಗಳ ಶ್ರೇಣಿಯನ್ನು (ಗಿಲ್ಡ್‌) ನಮೂದಿಸಲಾಗಿದೆ. ಇಲ್ಲಿಯ 2ನೆಯ ಚಾಳುಕ್ಯ ವಿಕ್ರಮಾದಿತ್ಯನ (733-44) ಶಾಸನವೊಂದರಲ್ಲಿ ಮಹಾಜನರು ಮತ್ತು ನಗರರನ್ನು ಉಲ್ಲೇಖಿಸಲಾಗಿದೆ. ಇನ್ನೊಂದು ಶಾಸನದಲ್ಲಿ 500 ಮಹಾಜನರು (ಚತುರ್ವೇದಿಗಳು), 8 ನಗರರು. 120 ಊರಳಿಗಳು ದುರ್ಗಾಭಗವತಿಗೆ ದತ್ತಿಕೊಟ್ಟ ವಿವರವಿದೆ. ಪ್ರ.ಶ. 1186ರ ಚಾಳುಕ್ಯ ತ್ರಿಭುವನಮಲ್ಲನ ಶಿರಸಂಗಿಯ ಶಾಸನದಿಂದ ಐಹೊಳೆ ದಕ್ಷಿಣ ಭಾರತದ ವಣಿಕ್ ಸಂಘದ ಕೇಂದ್ರವಾಗಿತ್ತೆಂದು ಗೊತ್ತಾಗುತ್ತದೆ. ಐದುನೂರು ಸ್ವಾಮಿಗಳು ಅದರ ಆಡಳಿತಾಧಿಕಾರಿಗಳಾಗಿದ್ದರು, ಕರ್ನಾಟಕ, ಆಂಧ್ರ ಮತ್ತು ದ್ರಾವಿಡ ದೇಶಗಳು ಅದರ ಆಡಳಿತಕ್ಕೆ ಒಳಪಟ್ಟಿದ್ದುವು. ತಮಿಳು ಶಾಸನಗಳೂ ಈ ಮಾತನ್ನು ದೃಢೀಕರಿಸಿವೆ. ಜೈನ, ಶೈವ, ವೈಷ್ಣವ ಸಂಪ್ರದಾಯಗಳೆಲ್ಲ ಐಹೊಳೆಯಲ್ಲಿ ಸಹಕರಿಸಿದ್ದವೆಂಬುದು ಅಲ್ಲಿಯ ಅವಶೇಷಗಳಿಂದ ತಿಳಿದುಬರುವ ಸಂಗತಿ.
ಛಾಯಾಂಕಣ
ಬದಲಾಯಿಸಿ
Aihole ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್‌ನಲ್ಲಿ ಲಭ್ಯವಿದೆ.
Photo Gallery
ಗಳಗನಾಥ ದೇವಾಲಯ ಸಮೂಹ
Ravana Phadi cave at Aihole
Ravana phadi cave interior
ಮೇಗುತಿ ದೇವಾಲಯ ಐಹೊಳೆ ಕೋಟೆ
ಮಲ್ಲಿಕಾರ್ಜುನ ದೇವಾಲಯ ಸಂಕೀರ್ಣ
ದುರ್ಗಾ ದೇವಾಲಯ ಐಹೊಳೆ
ಹುಚ್ಚಿಮಲ್ಲಿ ದೇವಾಲಯ ಐಹೊಳೆ
Temple at Aihole
ಹುಚ್ಚಪ್ಪಯ್ಯ ಮಠ
ಐಹೊಳೆ ಕೊಂಟಿಗುಡಿ
Aihole Temple
Temple at Aihole
Temple tank at Aihole
Ravana phadi cave
Aihole Lad Khan temple interior
Matrikas Cave Temple Aihole
Gangadhara (Shiva) at Ravana phadi cave
Aihole Uma Maheshvara, at Chhatrapati Shivaji Maharaj Vastu Sangrahalaya
A vew of the 11th century Mallikarjuna temple, a Kalyani (Later) Chalukya construction
A profile of the Durga temple mantapa (hall)
A wall relief at the Durga temple
A sanctum with relief at the Ravana Phadi cave temple
Relief sculpture in the Ravana Phadi cave temple